ಕನ್ಯಕಾಪರಮೇಶ್ವರಿ : ವೈಶ್ಯರ ಕುಲದೇವತೆ. ವಾಸವಾಂಬಾ ಈಕೆಯ ನಾಮಾಂತರ. ಒಮ್ಮೆ ಬ್ರಹ್ಮ ಇಂದ್ರನ ಮಗನಾದ ಜಯಂತನಿಗೆ ಶತಜಿಹ್ವನೆಂಬ ರಾಕ್ಷಸನನ್ನು ಕೊಲ್ಲುವಂತೆ ಆಜ್ಞೆ ಮಾಡಿದಾಗ ಶಚೀದೇವಿ ಮಗನನ್ನು ತಡೆದುದರ ಸಲುವಾಗಿ ಬ್ರಹ್ಮಶಾಪಕ್ಕೊಳಗಾಗಿ ಭೂಲೋಕದಲ್ಲಿ ವೈಶ್ಯಜಾತಿಯಲ್ಲಿ ಜನಿಸಿದಳು. ವಿಷ್ಣುವರ್ಧನನೆಂಬ ಅರಸು ಇವಳನ್ನು ತನಗೆ ಕೊಟ್ಟು ಮದುವೆ ಮಾಡಬೇಕೆಂದು ವಾಸವಾಂಬೆಯ ತಂದೆ ಕುಸುಮಶ್ರೇಷ್ಠಿಯನ್ನು ಬಲವಂತಪಡಿಸಿದ. ಅದಕ್ಕೆ ಒಪ್ಪದೆ ಆ ಕುಟುಂಬದವರೆಲ್ಲ ವಾಸವಾಂಬೆಯ ಜೊತೆಗೂಡಿ ಅಗ್ನಿಪ್ರವೇಶ ಮಾಡಲು ನಿಶ್ಚಯಿಸಿದರು. ವಾಸವಾಂಬೆ ತನಗೆ ಬಂದ ಶಾಪಾದಿ ವಿಷಯಗಳನ್ನು ತಿಳಿಸಿ ನಿಜಸ್ವರೂಪವನ್ನು ಪಡೆಯಲು ಅಗ್ನಿಯಲ್ಲಿ ಧುಮುಕಿದಳು. ಇತರರೂ ಹಾಗೆಯೆ ಮಾಡಿದರು. ವೈಶ್ಯರು ಅಂದಿನಿಂದ ವಾಸವಾಂಬೆಯನ್ನು ತಮ್ಮ ಕುಲದೇವತೆಯೆಂದು ಭಾವಿಸಿ ಕನ್ಯಕಾಪರಮೇಶ್ವರಿ ಎಂಬ ಹೆಸರಿನಿಂದ ಪುಜಿಸುತ್ತಾರೆ. ಈ ದೇವತೆಯ ಹೆಸರಿನಲ್ಲಿ ದಕ್ಷಿಣ ಭಾರತದಲ್ಲಿ ದೇವಾಲಯಗಳೂ ಕಲ್ಯಾಣಮಂಟಪಗಳೂ ಇವೆ.	(ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ